ಯುವವೈಯಾಕರಣರು -
19ನೆಯ ಶತಮಾನದ ಉತ್ತರಾರ್ಧದಲ್ಲಿ ಧ್ವನಿವ್ಯತ್ಯಾಸಗಳ ಕ್ರಮಬದ್ಧತೆಯನ್ನು ಒಂದು ಪ್ರಮುಖ ತತ್ತ್ವವೆಂಬಂತೆ ಪ್ರತಿಪಾದಿಸಿದ ಭಾಷಾತಜ್ಞರು (ಯಂಗ್ ಗ್ರಮೇರಿಯನ್ಸ್). ಗ್ರಿಮ್ (1785-1863) ಎಂಬಾತ ಗಥಿಕ್, ಗ್ರೀಕ್, ಹೈಜರ್ಮನ್ ಭಾಷೆಗಳಲ್ಲಿಯ ಧ್ವನಿಗಳಿಗಿರುವ ಸಂವಾದಗಳನ್ನು ತೋರಿಸಿದ. ಇದು ಗ್ರಿಮ್ ನಿಯಮವೆಂದು ಪ್ರಸಿದ್ಧವಾಯಿತು. ಈ ನಿಯಮಕ್ಕೆ ಅನೇಕ ಅಪವಾದಗಳಿದ್ದವು. ಅವನ್ನು ಬೇರೊಂದು ಬಗೆಯಲ್ಲಿ ವಿವರಿಸಬಹುದಾದ ಸಾಧ್ಯತೆಗಳಿವೆ ಎಂಬ ವಿಚಾರವನ್ನು ಡೇನಿಷ್ ವಿದ್ವಾಂಸ ಕಾರ್ಲ್ ವರ್ನರ್ (1846-96) ತೋರಿಸಿಕೊಟ್ಟ. ಆದ್ದರಿಂದ ಭಾಷೆಗೆ ಸಂಬಂಧಿಸಿದ ಕೆಲವು ನಿಯಮಗಳುಂಟು ಎಂಬುದನ್ನು ಭಾಷಾಶಾಸ್ತ್ರಜ್ಞರು ಮನಗಾಣಲಾರಂಭಿಸಿದ್ದರು. ಆದರೆ 1870ರಲ್ಲಿ ಆಗಸ್ಟ್ ಲೆಸ್ಕಿಯನ್ (1840-1916) ಎಂಬಾತ ಧ್ವನಿನಿಯಮಗಳಿಗೆ ಅಪವಾದಗಳೇ ಇಲ್ಲೆಂದು ಘೋಷಿಸಿದ. ಅವನನ್ನೂ ಅವನ ತಂಡದ ಕಾರ್ಲ್ ಬ್ರುಗ್‍ಮನ್ (1849-1922) ಮತ್ತು ಹರ್ಮನ್‍ಪೌಲ್ (1846-1921) ಮೊದಲಾದವರನ್ನು ಯಂಗ್ ಗ್ರಮೇರಿಯನ್ಸ್ ಎಂದು ಕರೆದು ಹಾಸ್ಯ ಮಾಡಿದರು. ಧ್ವನಿವ್ಯತ್ಯಾಸಗಳು ಒಂದು ನಿರ್ದಿಷ್ಟ ಕ್ರಮ ಅನುಸರಿಸುತ್ತವೆ; ಧ್ವನಿನಿಯಮಗಳಿಗೆ ಅಪವಾದಗಳೇ ಇಲ್ಲ ಎಂಬುದಾಗಿ ಅವರು ಪ್ರತಿಪಾದಿಸಿದ್ದರಿಂದ ಮುಂದಿನ ಅನೇಕ ಭಾಷಾವಿದ್ವಾಂಸರ ಉಗ್ರಟೀಕೆಗೆ ಗುರಿಯಾಗಬೇಕಾಯಿತು. 			
(ಟಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ